ಕೃಷ್ಣಾ ಹತೀಸಿಂಗ್
1907-1967. ಪಂಡಿತ ಮೋತಿಲಾಲ್ ನೆಹರು ಮತ್ತು ಸ್ವರೂಪರಾಣಿಯವರ ಕಿರಿಯ ಮಗಳು. ಎಲ್ಲರೂ ಪ್ರೀತಿಯಿಂದ ಇವಳನ್ನು ಕರೆಯುತ್ತಿದ್ದುದು ಬೆಟ್ಟಿಯೆಂದು. ಅಣ್ಣ ಮತ್ತು ಅಕ್ಕ ಇವಳಿಗಿಂತ ತುಂಬ ಹಿರಿಯರಾದುದರಿಂದ ಕೃಷ್ಣಾಳ ಬಾಲ್ಯ ಒಂಟಿತನದಲ್ಲಿಯೇ ಕಳೆಯಿತು. ಸದಾ ಅನಾರೋಗ್ಯದಿಂದ ನರಳುತ್ತಿದ್ದ ತಾಯಿ ಮತ್ತು ನಿರಂತರ ಕಾರ್ಯಮಗ್ನರಾಗಿರುತ್ತಿದ್ದ ತಂದೆ ಇವರ ಸಂಪರ್ಕವೂ ಆಗ ಇವಳಿಗೆ ಅಷ್ಟಾಗಿ ದೊರಕಲಿಲ್ಲ. ಇವಳನ್ನು ನೋಡಿಕೊಳ್ಳಲು ಆಂಗ್ಲ ಉಪಾಧ್ಯಾಯಿನಿಯೊಬ್ಬಳು ನೇಮಕವಾಗಿದ್ದಳು. ಬೆಳಗಿನಿಂದ ಸಂಜೆಯತನಕ ಇವಳ ಬಾಳು ಕಟ್ಟುನಿಟ್ಟುಗಳ ಸರಹದ್ದಿನಲ್ಲಿಯೇ ಸಾಗುತ್ತಿತ್ತು. ಇದರಿಂದ ಕೃಷ್ಣಾಳ ಅಸಹನೆ ಹೆಚ್ಚಿ ಒಮ್ಮೊಮ್ಮೆ ನಿಯಮಗಳನ್ನು ಮುರಿದು ಶಿಕ್ಷೆಗೊಳಗಾಗುತ್ತಿದ್ದಳು. ಚಿಕ್ಕಂದಿನಿಂದಲೇ ಈಕೆ ತುಸು ಹಟಗಾತಿ ಹಾಗೂ ಭಾವಾವೇಗದ ಸ್ವಭಾವದವಳಾಗಿದ್ದಳು. ಜೊತೆಗೆ ಯಾರೂ ಇಲ್ಲದಿದ್ದಾಗ ಕುದುರೆ ಲಾಯಗಳಲ್ಲಿ, ತೋಟದಲ್ಲಿ ಸುತ್ತಾಡುವುದೆಂದರೆ ಇವಳಿಗೆ ತುಂಬ ಮೆಚ್ಚು. ಕುದುರೆ ಸವಾರಿ ಇವಳಿಗೆ ಪ್ರಿಯವಾಗಿತ್ತು.

	1919ರಲ್ಲಿ ಮೊಟ್ಟಮೊದಲಿಗೆ ಕೃಷ್ಣಾ ಗಾಂಧೀಜಿಯನ್ನು ನೋಡಿದಳು. ಜಲಿಯನ್‍ವಾಲಾ ಬಾಗಿನ ಭೀಮಭಯಂಕರ ಘಟನೆಗಳನ್ನು ಓದಿ ಕೇಳಿ ತಿಳಿದಿದ್ದ ಈಕೆಯಲ್ಲಿ ಆ ಚಿಕ್ಕವಯಸ್ಸಿನಲ್ಲಿಯೇ ಆಳರಸರ ವಿರುದ್ಧ ಪ್ರತೀಕಾರ ಮನೋಭಾವನೆ ಬುಸುಗುಡುತ್ತಿತ್ತು. ಹಿಂಸೆ ರಕ್ತಪಾತಗಳಿಂದಲೇ ಮುಯ್ಯಿ ತೀರಿಸಿಕೊಳ್ಳಬೇಕೆಂಬುದು ಈಕೆಯ ಅಭಿಪ್ರಾಯವಾಗಿತ್ತು. ಆದರೆ ಗಾಂಧೀಜಿಯ ನಿಕಟ ಸಂಪರ್ಕ ಹೆಚ್ಚಿದಂತೆಲ್ಲ ಈಕೆ ಅವರ ಮಾರ್ಗದರ್ಶನವನ್ನೊಪ್ಪಿ ಕೆಲಸ ಮಾಡತೊಡಗಿದಳು.

	1920ನೆಯ ಇಸವಿಯಲ್ಲಿ ಸತ್ಯಾಗ್ರಹ ಚಳವಳಿ ಪ್ರಾರಂಭವಾದೊಡನೆ ನೆಹರು ಕುಟುಂಬದ ಆಗುಹೋಗುಗಳೆಲ್ಲ ಸಂಪೂರ್ಣವಾಗಿ ಬದಲಾದುವು. ಕೃಷ್ಣಾಳ ಶಾಲಾ ಜೀವನವೂ ಅಲ್ಲ್ಲಿಗೇ ಮುಕ್ತಾಯವಾಯಿತು. ಸುಖ ವೈಭವಗಳಲ್ಲಿ ಮೆರೆಯುತ್ತಿದ್ದ ಇವಳ ಮನೆ ತ್ಯಾಗ, ಸಂಯಮಗಳ ಬೀಡಾಯಿತು. ಕುಟುಂಬದ ಇತರರಂತೆ ಕೃಷ್ಣಾಳೂ ಆ ಬದಲಾವಣೆಗೆ ಹೊಂದಿಕೊಂಡಳು. ಒರಟಾದ ಖಾದಿ ಸೀರೆಯನ್ನುಟ್ಟಳು.

ಅಹಮದಾಬಾದಿನಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ತಾಯಿ, ಅತ್ತಿಗೆಯರೊಂದಿಗೆ ಕೃಷ್ಣಾಳೂ ಭಾಗವಹಿಸಿದಳು. ಅಲ್ಲಿಂದ ಅವರೊಟ್ಟಿಗೆ ಗಾಂಧೀಜಿಯ ಸಬರಮತಿ ಆಶ್ರಮದಲ್ಲಿ ಕೆಲವು ದಿನಗಳನ್ನು ಕಳೆದಳು.

	ಇಷ್ಟರಲ್ಲಿ ಕೃಷ್ಣಾಳಿಗೆ ಐರೋಪ್ಯ ಪ್ರವಾಸದ ಅವಕಾಶ ಲಭಿಸಿತು. ಮೊದಲೇ ತೆರಳಿದ್ದ ಅಣ್ಣ. ಅತ್ತಿಗೆಯರನ್ನು ಸೇರಲು ಇವಳು 1926ರ ಜೂನ್ ತಿಂಗಳಲ್ಲಿ ಯೂರೋಪಿಗೆ ಹೊರಟಳು. ಅದುವರೆಗೂ ದೊರಕದಿದ್ದ ಅಣ್ಣನ ನಿಕಟಸಾಮೀಪ್ಯ ವಿದೇಶದಲ್ಲಿ ಇವಳಿಗೆ ದೊರಕಿತು. ಆತ ಇವಳಿಗೆ ಆದರ್ಶಮಿತ್ರನಂತೆಯೂ ಆನಂದದಾಯಕ ಮಾರ್ಗದರ್ಶಕನಂತೆಯೂ ಕಂಡ. ಅತ್ತಿಗೆ ಅನಾರೋಗ್ಯಪೀಡಿತಳಾಗಿದ್ದುದರಿಂದ ಜಿನೀವದ ಮನೆಯಲ್ಲಿ ಗೃಹಕೃತ್ಯದ ಕಾರ್ಯಭಾರವೆಲ್ಲ ಕೃಷ್ಣಾಳ ಮೇಲೆ ಬಿತ್ತು. ರೂಢಿಯಿರದಿದ್ದ ಆ ಕೆಲಸ ಪ್ರಾರಂಭದಲ್ಲಿ ಕಷ್ಟಕರವಾಗಿದ್ದರೂ ಕ್ರಮೇಣ ಅದಕ್ಕಿವಳು ಒಗ್ಗಿಕೊಂಡಳು. ಅಲ್ಲಿಯೇ ಫ್ರೆಂಚ್ ಕಲಿತಳು. ಜಿನೀವದಲ್ಲಿ ನಡೆಯುತ್ತಿದ್ದ ಅಂತರರಾಷ್ಟ್ರೀಯ ಬೇಸಿಗೆ ಶಾಲೆಯಲ್ಲಿ ಭಾಗವಹಿಸಿದಳು. ಅಲ್ಲಿ ಪ್ರಪಂಚದ ನಾನಾ ಪ್ರಮುಖರ, ಗಣ್ಯ ವ್ಯಕ್ತಿಗಳ ಉಪನ್ಯಾಸಗಳನ್ನು ಕೇಳುವ ಮತ್ತು ಅವರನ್ನು ಸಂಧಿಸುವ ಅವಕಾಶ ಇವಳಿಗೆ ಲಭಿಸಿತು. ಅಣ್ಣನೊಡನೆ ಅನೇಕ ಸುಪ್ರಸಿದ್ಧ ಗ್ರಂಥಕರ್ತರನ್ನು, ಸಂಗೀತಗಾರರನ್ನು, ವಿಜ್ಞಾನಿಗಳನ್ನು ಸಂದರ್ಶಿಸಿದಳು. ಐನ್‍ಸ್ಟೈನ್, ರೋಮೇನ್ ರೋಲಾ, ಅರ್ನೆಸ್ಟ್ ಟೋಲರ್ ಮುಂತಾದ ಮಹಾನುಭಾವರು ಇವಳ ಸ್ಮøತಿಪಥದಲ್ಲಿ ಅಚ್ಚಳಿಯದೆ ನಿಂತರು. ಜವಹರರ ಕಾರ್ಯದರ್ಶಿತ್ವವನ್ನು ವಹಿಸುತ್ತ ಅವರೊಡನೆ ಅನೇಕ ಊರು, ನಗರಗಳನ್ನು ಸುತ್ತಿದಳು. ಇದರಿಂದೀಕೆಗೆ ದುಡಿಮೆಯ ಜೊತೆಯಲ್ಲಿ ಒಳ್ಳೆಯ ಶಿಕ್ಷಣವೂ ದೊರೆಯಿತು. ಅಡ್ಡಿ ಆತಂಕಗಳಿಲ್ಲದ ಸ್ವತಂತ್ರ ವಾತಾವರಣದಲ್ಲಿ ಬೆಳೆದುದರಿಂದ ಕೃಷ್ಣಾ ಹೊಸಬರೊಂದಿಗೆ ಬಹುಬೇಗನೆ ಹೊಂದಿಕೊಳ್ಳುತ್ತಿದ್ದಳು. ಇದರಿಂದ ಹೋದೆಡೆಯಲ್ಲೆಲ್ಲ ಅನೇಕ ಗೆಳೆಯರನ್ನು ಸಂಪಾದಿಸುತ್ತಿದ್ದಳು. ಸಾಮ್ರಾಜ್ಯಷಾಹಿಗಳನ್ನು ವಿರೋಧಿಸುವ ಸಲುವಾಗಿ ಬ್ರಸಲ್ಸ್ ನಗರದಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅಣ್ಣನೊಡನೆ ಭಾಗವಹಿಸಿದಳು. ಅಲ್ಲಿಂದ ಲಂಡನ್, ಬರ್ಲಿನ್, ಮಾಸ್ಕೋಗಳನ್ನು ಸಂದರ್ಶಿಸಿ 1927ರ ಡಿಸೆಂಬರ್‍ನಲ್ಲಿ ಭಾರತಕ್ಕೆ ಹಿಂದಿರುಗಿದಳು. ಐರೋಪ್ಯ ಪ್ರವಾಸ ಹೀಗೆ ಅವಳ ಬಾಳಿನಲ್ಲಿ ಅನೇಕ ಹೊಸ ಅನುಭವಗಳನ್ನು ತಂದುಕೊಟ್ಟಿತು.

	ಯೂರೋಪಿನಿಂದ ಹಿಂದಿರುಗಿದ ಮೇಲೆ ಮಾಂಟೆಸೋರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇರಿದಳು. ಮಗಳು ಹೀಗೆ ಕೆಲಸಕ್ಕೆ ಸೇರುವುದನ್ನು ತಂದೆ ತಾಯಿಯರು ಪ್ರಬಲವಾಗಿ ವಿರೋಧಿಸಿದರೂ ಕೊನೆಗೆ ಅಣ್ಣನ ಮಧ್ಯಸ್ಥಿಕೆಯಿಂದ ಇವಳ ಇಚ್ಛೆ ನೆರವೇರಿತು. ದೇಶದಲ್ಲಿ ಮತ್ತೆ ಅಸಹಕಾರ ಆಂದೋಳನ ಮೊದಲಾಯಿತು. ಕೃಷ್ಣಾಳೂ ತನ್ನ ಸಮಯವನ್ನೆಲ್ಲ ಅದಕ್ಕಾಗಿ ಮೀಸಲಿರಿಸಲು ಕಾತರಳಾಗಿ ಒಂದೂವರೆ ವರ್ಷಗಳ ತನ್ನ ವೃತ್ತಿಜೀವನಕ್ಕೆ ರಾಜೀನಾಮೆಯಿತ್ತಳು. ಅಲಹಾಬಾದಿನ ಯುವಕಸಂಘದ ಜಂಟಿಕಾರ್ಯದರ್ಶಿಯಾಗಿ ನಾನಾಬಗೆಯ ಚಟುವಟಿಕೆಗಳಲ್ಲಿ ತೊಡಗಿದಳು.

	1930ರಲ್ಲಿ ನಡೆದ ಇತಿಹಾಸ ಪ್ರಸಿದ್ಧವಾದ ದಂಡಿಯ ಉಪ್ಪಿನ ಸತ್ಯಾಗ್ರಹದ ಕಾಲದಲ್ಲಿ ಚಳವಳಿಯ ಮುಖಂಡರೆಲ್ಲ ಸೆರೆಮನೆಗೆ ಹೋದರು. ಆಗ ಮಹಿಳೆಯರು ಅಗ್ರಸ್ಥಾನದಲ್ಲಿ ನಿಂತು ಚಳವಳಿಯನ್ನು ಮುಂದುವರಿಸಿದರು. ಕೃಷ್ಣಾಳೂ ಸ್ವಯಂಸೇವಕದಳವನ್ನು ಸೇರಿ ವಿದೇಶಿವಸ್ತ್ರ ಬಹಿಷ್ಕಾರಾದಿ ಕಾರ್ಯಕ್ರಮಗಳಲ್ಲಿ ತೊಡಗಿದಳು. 1932ರ ಜನವರಿ 27ರಂದು ಕೃಷ್ಣಾ ಅಕ್ಕನೊಡನೆ ಬಂಧಿತಳಾದಳು. ಹಿಂದೊಂದು ಬಾರಿ ಸೆರೆಮನೆಯಲ್ಲಿ ಕೇವಲ ಹನ್ನೆರಡು ಗಂಟೆಗಳನ್ನು ಕಳೆದಿದ್ದಳಷ್ಟೆ. ಲಖನೌ ಸೆರೆಮನೆಯಲ್ಲಿ ತಾನು ಕಳೆದ ಹನ್ನೊಂದೂವರೆ ತಿಂಗಳ ಅನುಭವಗಳನ್ನು ತನ್ನ ಆತ್ಮಕಥೆಯಲ್ಲಿ ಮನಮುಟ್ಟುವಂತೆ ಈಕೆ ವರ್ಣಿಸಿದ್ದಾಳೆ.

	1933ರ ಅಕ್ಟೋಬರ್ 20ರಂದು ಕೃಷ್ಣಾ ಮತ್ತು ಗುಣೋತ್ತಮ ಹತೀಸಿಂಗ್ (ರಾಜಾ) ಇವರ ವಿವಾಹ ಆನಂದಭವನದಲ್ಲಿ ಯಾವ ವೈಭವಾಡಂಬರಗಳಿಲ್ಲದೆ ಸರಳವಾಗಿ ನಡೆಯಿತು. ಮದುವೆಯಾದ ಕೆಲಕಾಲದಲ್ಲಿಯೆ ಪತಿ ರಾಜಕೀಯ ಆಂದೋಳನದಲ್ಲಿ ಧುಮುಕಿದ. ಕೃಷ್ಣಾಳ ಪಾಲಿಗೆ ಸುಖದ ದಿನಗಳು ಬಹುಬೇಗ ದೂರವಾದುವು; ದೀರ್ಘಾವಧಿಯ ವಿಯೋಗ, ಅನಿಶ್ಚಿತತೆ, ಅಶಾಂತಿಗಳನ್ನಿವಳು ಅನುಭವಿಸಬೇಕಾಯಿತು. ಮಕ್ಕಳಾದ ಹರ್ಷ, ಅಜಿತರಿಬ್ಬರೂ ಆಗ ತುಂಬ ಚಿಕ್ಕವರಾಗಿದ್ದುದರಿಂದ, ಅವರ ಪೋಷಣೆ ಅಗತ್ಯವಾಗಿದ್ದುದರಿಂದ ಕೃಷ್ಣಾ ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸಲಿಲ್ಲ. ಆದರೂ ಸ್ತ್ರೀಸಮಾಜಗಳನ್ನು ಸೇರಿ ಸಮಾಜ ಸೇವೆಯನ್ನು ಕೈಗೊಂಡಳು. ಹರಿಜನಕೇರಿಗಳೇ ಅವಳ ಕಾರ್ಯರಂಗವಾದುವು. ಚಳವಳಿಗೆ ಸಂಬಂಧಪಟ್ಟ ಅನೇಕ ಬಗೆಯ ಗುಪ್ತ ಚಟುವಟಿಕೆಗಳಲ್ಲಿ ಈಕೆಯ ಪಾತ್ರವಿರುತ್ತಿತ್ತು. ಕಾಂಗ್ರೆಸಿನ ಗುಪ್ತಪ್ರಸಾರಕೇಂದ್ರವನ್ನು ನಡೆಸುವುದು, ಚಳವಳಿಗೆ ಅಗತ್ಯವಾದ ಹಣವನ್ನು ಸಂಗ್ರಹಿಸಿ ಬೇರೆಡೆಗೆ ಒಯ್ಯುವುದು, ಗಾಯಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆ ನೀಡುವುದು-ಮುಂತಾದ ಕಾರ್ಯಗಳಲ್ಲಿವಳು ತೊಡಗಿರುತ್ತಿದ್ದಳು. 1943ರಲ್ಲಿ ಬಂಗಾಳದಲ್ಲಿ ಭೀಕರ ಕ್ಷಾಮ ತಲೆದೋರಿದಾಗ ಹಲವು ತಿಂಗಳು ಕೃಷ್ಣಾ ಸ್ವಯಂಸೇವಕಿಯಾಗಿ ಅಗತ್ಯವಾದ ಸೇವೆ ಸಲ್ಲಿಸಿದಳು. ಈ ನಡುವೆ 1947ರ ಜನವರಿಯಂದು ಉಪನ್ಯಾಸಗಳನ್ನು ನೀಡುವ ಸಲುವಾಗಿ ಪತಿಯೊಡಗೂಡಿ ಅಮೆರಿಕೆಗೆ ಹೋಗಿ ಮೇನಲ್ಲಿ ಹಿಂದಿರುಗಿದಳು.

	ಆಗಸ್ಟ್ 15ರಂದು ಭಾರತ ಸ್ವತಂತ್ರವಾದ ಮೇಲೆ ಕೃಷ್ಣಾಳ ಜೀವನ ಮುಂಬಯಿ ಮತ್ತು ದೆಹಲಿಗಳ ನಡುವೆ ಸಾಗುತ್ತಿತ್ತು. ಬಹು ವೇಳೆ ಅಣ್ಣನ ಮನೆಯಲ್ಲಿ ಅತಿಥೇಯಳ ಕರ್ತವ್ಯವನ್ನು ನಿರ್ವಹಿಸುತ್ತಿದ್ದಳು. ಅಂಗವಿಕಲ ಮಕ್ಕಳ ಚಿಕಿತ್ಸೆಗಾಗಿ ಮುಂಬಯಿಯಲ್ಲಿ ಒಂದು ಆಸ್ಪತ್ರೆಯನ್ನು ಸ್ಥಾಪಿಸಿದಳು. ಆರಂಭದಲ್ಲಿ ಕೇವಲ ನಾಲ್ಕೈದು ಜನರ ಸಹಕಾರದಿಂದ ಅಲ್ಪ ಬಂಡವಾಳದಿಂದ ಆಸ್ಪತ್ರೆ ಆರಂಭವಾಯಿತು. ಬೆಳಗಿನಿಂದ ಸಂಜೆಯತನಕ ತಾನೂ ಅಲ್ಲಿ ದುಡಿದಳು. ಇದರಿಂದ ಇವಳ ಆರೋಗ್ಯ ಕೆಟ್ಟಿತಾದರೂ ಧೃತಿ ಕೆಡಲಿಲ್ಲ. ಕ್ರಮೇಣ ಆ ಸಂಸ್ಥೆ ಜನಪ್ರಿಯವಾಗಿ ಇಂದು ಅನೇಕ ತಜ್ಞರನ್ನೊಳಗೊಂಡ ಸುಸಜ್ಜಿತವಾದ ಸಂಸ್ಥೆಯಾಗಿ ಬೆಳೆದಿದೆ.

	ಬಾಲಾಪರಾಧಿಗಳ ನ್ಯಾಯಾಲಯದಲ್ಲಿ ಗೌರವ ಮ್ಯಾಜಿಸ್ಟ್ರೇಟಳಾಗಿ ಕೃಷ್ಣಾ ಹದಿನೆಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದಳು. 1950ರಲ್ಲಿ ಬಾಲಾಪರಾಧವನ್ನು ತಡೆಗಟ್ಟುವ ಸಲುವಾಗಿ ಒಂದು ಸಮಿತಿಯನ್ನು ಸ್ಥಾಪಿಸಿದಳು. ವಿಚಾರಣೆಯಾಗುವ ತನಕ ಬಾಲಾಪರಾಧಿಗಳು ಅನೇಕ ತಿಂಗಳುಗಳ ತನಕ ಸೆರೆಮನೆಯಲ್ಲಿ ಕೊಳೆಯಬೇಕಾಗುತ್ತಿತ್ತು. ಆ ಸಮಯದಲ್ಲಿ ಅವರಿಗೆ ಅನೇಕ ಬಗೆಯ ಶಿಕ್ಷಣವನ್ನು ಕೊಡುವ ಪ್ರಯತ್ನವನ್ನು ಕೈಗೊಂಡಳು. ಅಲ್ಲಿ ಅವರಿಗೆ ಹೊಲಿಗೆ, ನೇಯ್ಗೆ, ಮಡಕೆ ಕುಡಿಕೆಗಳ ಮೇಲೆ ಚಿತ್ರಣ ಮಾಡುವುದು ಮುಂತಾದ ಕೈಕಸಬುಗಳ ಜೊತೆಗೆ ಓದುಬರೆಹಗಳನ್ನೂ ಕಲಿಸಲಾಗುತ್ತಿತ್ತು. ಸಮಿತಿಯ ದುಡ್ಡಿನಿಂದ ಅವರನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದಳು. ತನ್ನ ಸೆರೆವಾಸದ ಅವಧಿಯಲ್ಲಾಕೆ ಕಂಡುಂಡ ಅನೇಕ ಕಹಿ ಅನುಭವಗಳು ಈ ಎಲ್ಲ ಕಾರ್ಯಗಳಿಗೂ ಪ್ರೇರಕವಾಗಿದ್ದವು. ತಾನೇ ಸ್ಥಾಪಿಸಿದ ಈ ಸಮಿತಿಗಳಲ್ಲದೆ ಇನ್ನೂ ಅನೇಕಾನೇಕ ಸಮಿತಿಗಳಲ್ಲಿ ಕೃಷ್ಣಾ ಸೇವೆ ಸಲ್ಲಿಸುತ್ತಿದ್ದಳು.

	ಸಮಾಜ ಸೇವಾ ಕಾರ್ಯದೊಡನೆ ಲೇಖನಕಾರ್ಯವೂ ಸತತವಾಗಿ ಸಾಗುತ್ತಿತ್ತು. 1944ರಲ್ಲಿ ಪ್ರಕಟವಾದ ವಿತ್ ನೋ ರಿಗ್ರಟ್ಸ್ (ಕನ್ನಡಾನುವಾದ-ನೆನಪು ಕಹಿಯಲ್ಲ-ದೇಜಗೌ) ಇವಳ ಚೊಚ್ಚಲ ಕೃತಿ. ಇಡೀ ಕುಟುಂಬದವರೆಲ್ಲ ಸೆರೆಮನೆ ಸೇರಿದಾಗ ದೀರ್ಘಾವಧಿಯ ಏಕಾಂಗಿತನದ ಬೇಸರ ಕಳೆಯಲು ಕೈಗೊಂಡ ಪ್ರಯತ್ನದ ಫಲ ಈ ಕೃತಿ. ಇದು ಆತ್ಮಕಥೆಯ ಸ್ವರೂಪದ್ದು. ನೆಹರು ಕುಟುಂಬದ ಜೀವಂತಕಥೆಯೂ ಇದರಲ್ಲೇ ಹಾಸುಹೊಕ್ಕಾಗಿ ಹೆಣೆದುಕೊಂಡಿದೆ. ಈಕೆ ಅತ್ಯುತ್ತಮ ಲೇಖಕಿಯೆಂಬಂಶ ಈ ಮೊದಲ ಕೃತಿಯಲ್ಲಿಯೇ ವ್ಯಕ್ತವಾಗುತ್ತದೆ. ವ್ಯಕ್ತಿ ಚಿತ್ರಗಳನ್ನು ಕೊಡುವುದರಲ್ಲೀಕೆ ಸಿದ್ಧಹಸ್ತಳು. ತಂದೆ, ತಾಯಿ, ಅಣ್ಣ, ಅತ್ತಿಗೆ, ದೊಡ್ಡಮ್ಮ, ಸೆರೆ ಮನೆಯ ಬಚೂಲಿ-ಇವರ ಚಿತ್ರಗಳು ಓದುಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಸ್ವಂತ ಅನುಭವಗಳನ್ನು ಹೇಳುವಲ್ಲಿ ಈಕೆಯ ನೇರ, ನಿಷ್ಕಪಟ, ಮುಚ್ಚು ಮರೆಯಿಲ್ಲದ ಬಿಚ್ಚು ಮನೋಭಾವ ವ್ಯಕ್ತವಾಗುತ್ತದೆ. ಸೂಕ್ಷ್ಮಸಂವೇದನಶೀಲತೆ, ಹರಿತವಾದ ನಿರೀಕ್ಷಣ ಸಾಮಥ್ರ್ಯ, ಗುಣದೋಷಗಳೆರಡನ್ನೂ ಎತ್ತಿಹೇಳುವ ಎದೆಗಾರಿಕೆ ಇವಳ ಎಲ್ಲ ಕೃತಿಗಳಲ್ಲೂ ಕಂಡುಬರುತ್ತವೆ. ಈಕೆಯ ನಿರೂಪಣಕ್ರಮ ಓದುಗರನ್ನು ಮೈಮರೆಸುತ್ತದೆ. ಶೈಲಿಯಂತೂ ಹೃದಯಂಗಮವಾದುದು.

	ಇದಲ್ಲದೆ ಈಕೆ ಮತ್ತೆ ಆರು ಕೃತಿಗಳನ್ನು ಬರೆದಿದ್ದಾಳೆ: ಷ್ಯಾಡೋಸ್ ಆನ್ ದಿ ವಾಲ್. ಗಾಂಧೀಜಿ (ಮಕ್ಕಳಿಗಾಗಿ), ಬ್ರೈಡ್ಸ್ ಬುಕ್ ಆಫ್ ಬ್ಯೂಟಿ (ಮುಲ್ಕ್ ರಾಜ್ ಆನಂದರೊಡನೆ), ನೆಹ್ರೂಸ್ ಲೆಟರ್ಸ್ ಟು ಹಿಸ್ ಸಿಸ್ಟರ್, ವಿ ನೆಹ್ರೂಸ್. ಇವಳ ಕೊನೆಯ ಕೃತಿ ಇಂದಿರಾ ಗಾಂಧಿಯನ್ನು ಕುರಿತು ಬರೆದ ಡಿಯರ್ ಟು ಬಿಹೋಲ್ಡ್ ಎಂಬ ಪುಸ್ತಕ. ಈ ಕೃತಿ ಪ್ರಕಟವಾದಾಗ (1969) ಈಕೆ ಬದುಕಿರಲಿಲ್ಲ. ತನ್ನ ಪುಸ್ತಕವೊಂದರ ಪ್ರಕಟಣ ಸಮಾರಂಭದಲ್ಲಿ ಭಾಗವಹಿಸಲು ನ್ಯೂಯಾರ್ಕಿಗೆ ತೆರಳಿದ್ದು 1967ರ ನವೆಂಬರ್ 9ರಂದು ಸ್ವದೇಶಕ್ಕೆ ಹಿಂದಿರುಗುವ ಸಿದ್ಧತೆಯಲ್ಲಿರುವಾಗಲೇ ಲಂಡನಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದಳು.

	ಕೃಷ್ಣಾ ಹತೀಸಿಂಗ್ ನೆಹರು ಮನೆತನದ ಇತರರಂತೆ ರಾಜಕೀಯದಲ್ಲಿ ಸ್ಥಾನಮಾನಗಳನ್ನು ಗಳಿಸಲಿಲ್ಲ, ನಿಜ. ಆದರೆ ನಿಜವಾದ ದೇಶಭಕ್ತಳಾಗಿ, ಸಮಾಜಸೇವಕಿಯಾಗಿ, ಉತ್ತಮ ಲೇಖಕಿಯಾಗಿ ಈಕೆ ತನ್ನ ಕೃತಿಗಳ ಮೂಲಕ ಬಹುಕಾಲ ಉಳಿಯುತ್ತಾಳೆಂಬುದರಲ್ಲಿ ಸಂದೇಹವಿಲ್ಲ.                   						
	(ಜೆ.ಎಸ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ